ಕಾವೇರಿನದಿ

 ಭಾರತದ ಪರ್ಯಾಯದ್ವೀಪೀಯ ಪ್ರದೇಶದ ಮುಖ್ಯ ನದಿಗಳಲ್ಲೊಂದು. ಮೈಸೂರು ರಾಜ್ಯದ ಕೊಡಗು ಜಿಲ್ಲೆಯಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಉಗಮಸ್ಥಾನದಿಂದ ಸಂಗಮದವರೆಗೆ ಇದರ ಉದ್ದ 475 ಮೈ.

 ಹಿಂದೂ ಪುರಾಣೋಕ್ತವಾದ ಏಳು ಪವಿತ್ರ ನದಿಗಳಲ್ಲಿ ಕಾವೇರಿಯೂ ಒಂದು. ದಕ್ಷಿಣ ಗಂಗಾ ಎಂದು ಇದರ ಪ್ರತೀತಿ. ತನ್ನಲ್ಲಿ ಮೀಯುವ ಅಸಂಖ್ಯಾತ ಯಾತ್ರಿಕರಿಂದ ಬಂದ ಪಾಪದ ಪರಿಹಾರ್ಥವಾಗಿ ಗಂಗೆಯೇ ವರ್ಷಕ್ಕೊಮ್ಮೆ (ತುಲಾಸಂಕ್ರಮಣದಂದು) ಆಂತರ್ಗತಳಾಗಿ ಕಾವೇರಿಯ ಉಗಮಸ್ಥಾನದಲ್ಲಿ ಮೀಯುತ್ತಾಳೆಂಬುದು ಆ ಸುತ್ತಿನ ಜನರ ನಂಬಿಕೆ. ಕಾವೇರಿ ನದಿ ಹರಿಯುವ ಪ್ರದೇಶದ ಜನಕ್ಕೆ ಅದರಿಂದಾಗಿರುವ ಉಪಕಾರ ಅಪಾರ. ಮೈಸೂರು ಮತ್ತು ತಮಿಳುನಾಡು ರಾಜ್ಯಗಳ ಕೃಷಿ ಕೈಗಾರಿಕಾಭಿವೃದ್ಧಿಗೆ ಇದು ಬಹಳಮಟ್ಟಿಗೆ ಕಾರಣವಾಗಿದೆ. ಕಾವೇರಿ ಹರಿಯುವ ನಾಡು ಪವಿತ್ರಭೂಮಿಯೆಂದು ಪರಿಗಣಿತವಾಗಿರುವುದಕ್ಕೆ ತಲತಲಾಂತರದಿಂದ ಅದರಿಂದ ಲಭ್ಯವಾಗುತ್ತಿರುವ ಉಪಕಾರ ಮುಖ್ಯ ಕಾರಣ.

ಉಗಮ, ಹರಿವು : ಕೊಡಗು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿಯಲ್ಲಿ (ಉ. ಅ25º ಪೂ.ರೇ. 75º 34†) (4447†) ಕಾವೇರಿ ಉಗಮಿಸುತ್ತದೆ. ಈ ಸ್ಥಳಕ್ಕೆ ತಲಕಾವೇರಿಯೆಂದು ಹೆಸರು. ಗಿರಿಯ ನೆತ್ತಿಯ ಮೇಲೆ ಅರಬ್ಬೀ ಸಮುದ್ರಕ್ಕೆ  ಹತ್ತಿರದಲ್ಲಿಯೇ ಹುಟ್ಟುವ ಈ ನದಿ ಅಡ್ಡ ಬಂದ ಪರ್ವತವನ್ನು ದಾಟಿ ಪೂರ್ವಾಭಿಮುಖವಾಗಿ ಹರಿಯುವುದು ಒಂದು ಸ್ವಾರಸ್ಯ. ಪಶ್ಚಿಮದತ್ತ ಜಾರಿದ್ದರೆ ಅದರ ನೀರು ನೆಟ್ಟಗೆ ಅರಬ್ಬೀ ಕಡಲನ್ನು ಸೇರುತ್ತಿತ್ತು. ಪೂರ್ವದಲ್ಲಿ ಅದು ಈಗ ಹರಿಯುತ್ತಿರುವ ಪ್ರದೇಶ ಆಗ ಬಹುತೇಕ ಬರಡಾಗುತ್ತಿತ್ತು. ಘಟ್ಟದ ನೆತ್ತಿಗೆರೆಯ ಪಶ್ಚಿಮಕ್ಕಿರುವ ಪ್ರದೇಶದ ಒಂದು ಭಾಗದ ನೀರನ್ನೂ ಕಾವೇರಿ ಕೂಡಿಸಿಕೊಳ್ಳುತ್ತದೆ. ಜೂನಿನಿಂದ ಸೆಪ್ಟೆಂಬರಿನವರೆಗೆ ಕೊಡಗಿನಲ್ಲಿ ಸಮೃದ್ಧಿಯಾಗಿ ಬೀಳುವ ಮಳೆಯಿಂದಾಗಿ ಆ ಕಾಲದಲ್ಲಿ  ಕಾವೇರಿ ತುಂಬಿ ಹರಿಯುತ್ತದೆ. ಘಟ್ಟದ ಬದಿಯ ಮೈದಾನಕ್ಕೂ ತಮಿಳುನಾಡಿನ ಬಯಲು ನೆಲಕ್ಕೂ ನೀರುಣಿಸುತ್ತದೆ.

 ಉಗಮಸ್ಥಾನದಿಂದ ಸಿದ್ದಾಪುರದವರೆಗೆ ಆಗ್ನೇಯಾಭಿಮುಖವಾಗಿ ಹರಿಯುತ್ತ ಅಲ್ಲಿಂದ ಈಶಾನ್ಯದಿಕ್ಕಿನಲ್ಲಿ ಹರಿಯುವ ಕಾವೇರಿ, ಕೊಡಗಿನ ಅನೇಕ ಉಪನದಿಗಳನ್ನು ತನ್ನಲ್ಲಿ ಸೇರಿಸಿಕೊಳ್ಳುತ್ತದೆ. ಹುಟ್ಟುವೆಡೆಯಿಂದ ಮೂರು ಮೈಲಿ ಕೆಳಕ್ಕೆ ಭಾಗಮಂಡಲದಲ್ಲಿ ಕಾವೇರಿಯನ್ನು ಕೂಡಿಕೊಳ್ಳುವ ನದಿಯ ಹೆಸರು ಕನ್ನಿಕ. ಕೊಡಗಿನಲ್ಲಿ ದಕ್ಷಿಣ ಕಡೆಯಿಂದ ಕಾವೇರಿಗೆ ಬಂದು ಸೇರುವವು ಕಕ್ಕಬೆ ಹೊಳೆ, ಕಾಡನೂರು ಹೊಳೆ ಮತ್ತು ಸಮ್ಮೆ ಹೊಳೆ. ಮಡಿಕೇರಿ ಶ್ರೇಣಿಯ ದಕ್ಷಿಣದ ಜಲಾನಯನ ಪ್ರದೇಶದಿಂದ ಹರಿದುಬರುವ ಮುತ್ತಾರುಮುಡಿ ಹೊಳೆ ಕಾವೇರಿಯ ಉತ್ತರ ಪಾಶ್ರ್ವದಲ್ಲಿ ಅದನ್ನು ಸೇರಿಕೊಳ್ಳುತ್ತದೆ. ಈ ಭಾಗದಲ್ಲಿ ಕಾವೇರಿಯನ್ನು ಕೂಡಿಕೊಳ್ಳುವ ಇನ್ನೊಂದು ನದಿ ಚಿಕ್ಕ ಹೊಳೆ. ಕುಶಾಲನಗರಕ್ಕೆ ಉತ್ತರದಲ್ಲಿ ಕಾವೇರಿಯಲ್ಲಿ ಸಂಗಮಿಸುವ ಮುಖ್ಯ ನದಿಯೆಂದರೆ ಹಟ್ಟಿ ಅಥವಾ ಹಾರಂಗಿ. ಕಕ್ಕೆಹೊಳೆ, ಜೇರನಹೊಳೆ, ಹಟ್ಟಿಹೊಳೆ ಇವು ಹಾರಂಗಿಯನ್ನು ಸೇರುವ ಹೊಳೆಗಳು.

 ಹುಟ್ಟುವೆಡೆಯಿಂದ ಘಟ್ಟದ ಇಳಿಜಾರಿನಲ್ಲಿ ವೇಗವಾಗಿ ಹರಿಯುವ ಕಾವೇರಿ ಕೇವಲ 8 ಕಿ.ಮೀ. ಸಾಗುವ ವೇಳೆಗೆ 450 ಮೀ.ನಷ್ಟು ಔನ್ನತ್ಯವನ್ನು ಕಳೆದುಕೊಂಡಿರುತ್ತದೆ. ಭಾಗಮಂಡಲದಿಂದಲೇ ಅದಕ್ಕೆ ಪ್ರೌಢನದಿಯ ಲಕ್ಷಣಗಳೆಲ್ಲ ಪ್ರಾಪ್ತವಾಗಿರುತ್ತವೆ. ಅಡ್ಡಬರುವ ಬಂಡೆಗಳಲ್ಲಿ ಯಾವುದೂ ಅಭೇದ್ಯವಾದ ಅಡ್ಡಿಯಾಗಿ ಪರಿಣಮಿಸಿಲ್ಲ. ಪ್ರಾಚೀನ ನದಿಯ ಚಿಹ್ನೆಗಳೆಲ್ಲ ಕಾವೇರಿಗೂ ಉಂಟು. ಇದು ಹರಿಯುವ ಪಾತ್ರದ ಮೇಲ್ಮೈಗೆ ಈ ನದಿಯಷ್ಟು ವಯಸ್ಸಾಗಿಲ್ಲ. ಈಚೆಗೆ ಸಂಭವಿಸಿದ ಭೂ ಉತ್ಕರ್ಷದ ಪರಿಣಾಮವದು.

 ಹಾರಂಗಿಯೊಡಗೂಡಿ ಮೈಸೂರು-ಕೊಡಗು ಜಿಲ್ಲೆಗಳ ಗಡಿಗುಂಟ ಸಾಗಿದ ತರುವಾಯ ಇದು ಹಾಸನ ಜಿಲ್ಲೆಯ ದಕ್ಷಿಣಾಗ್ರದಲ್ಲಿ ರಾಮನಾಥಪುರದ ಬಳಿ ಬಲಕ್ಕೆ ತಿರುಗಿ ಪೂರ್ವಾಭಿಮುಖವಾಗಿ ಹರಿಯುತ್ತದೆ. ಅಲ್ಲಿಂದಲೇ ಇದಕ್ಕೆ ಮೈಸೂರು ಜಿಲ್ಲೆಯತ್ತ ಗಮನ. ಅನತಿದೂರದಲ್ಲೇ ಸಾಲಿಗ್ರಾಮದ ಬಳಿಯ ಚುಂಚನಕಟ್ಟೆಯಲ್ಲಿ ಜಲಪಾತವಾಗಿ ಪರಿಣಮಿಸಿ, ವೇಗವನ್ನಿಷ್ಟು ಕಡಿಮೆಗೊಳಿಸಿಕೊಂಡು, ಕೃಷ್ಣರಾಜನಗರದ ಮಾರ್ಗವಾಗಿ ಮುಂದೆ ಸಾಗುವ ಕಾವೇರಿಯನ್ನು ಕನ್ನಂಬಾಡಿಯ ಬಳಿಯಲ್ಲಿ ಸಂಗಮಿಸುವ ಉಪನದಿಗಳು ಹೇಮಾವತಿ ಮತ್ತು ಲಕ್ಷ್ಮಣತೀರ್ಥ, ಇವೆರಡೂ ಅನುಕ್ರಮವಾಗಿ ಕೊಡಗಿನ ಉತ್ತರದಕ್ಷಿಣ ಪ್ರದೇಶಗಳ ನೀರನ್ನು ಕೂಡಿಸಿಕೊಂಡು, ಮೊದಲನೆಯದು ಹಾಸನ ಜಿಲ್ಲೆಯಲ್ಲೂ ಎರಡನೆಯದು ಮೈಸೂರು ಜಿಲ್ಲೆಯಲ್ಲೂ ಹರಿದುಬರುತ್ತವೆ.

 ಕನ್ನಂಬಾಡಿಯ ಬಳಿಯಲ್ಲಿ ಮಂಡ್ಯ ಜಿಲ್ಲೆ ಸೇರುವ ಕಾವೇರಿ ಆ ಜಿಲ್ಲೆಯ ದಕ್ಷಿಣಾಗ್ರದಲ್ಲೇ ಹರಿದು, ತನ್ನ ವೇಗವನ್ನು ಇನ್ನೂ ತಗ್ಗಿಸಿಕೊಂಡು, ಶ್ರೀರಂಗಪಟ್ಟಣದಲ್ಲಿ ಕವಲೊಡೆದು ಅದನ್ನೊಂದು ದ್ವೀಪವಾಗಿ ಪರಿವರ್ತಿಸಿ, ಮತ್ತೆ ಮೈಸೂರು ಜಿಲ್ಲೆಯ ಉತ್ತರದಂಚಿನಲ್ಲಿ ಸಾಗುತ್ತದೆ. ಬನ್ನೂರು, ಸೋಸಲೆಗಳನ್ನು ದಾಟಿದ ಮೇಲೆ ಸಿಕ್ಕುವುದು ತಿರುಮಕೂಡಲು ನರಸೀಪುರ. ಮೈಸೂರು ಜಿಲ್ಲೆಯ ದಕ್ಷಿಣದ ಕಡೆಯಿಂದ ಹರಿದು ಬರುವ ಕಪಿನಿ ನದಿ ಕಾವೇರಿಯನ್ನು ಸೇರುವುದು ಈ ಎಡೆಯಲ್ಲಿ.

 ಮಂಡ್ಯ-ಮೈಸೂರು ಜಿಲ್ಲೆಗಳ ಗಡಿ ಮುಟ್ಟಿ ದಕ್ಷಿಣಕ್ಕೆ ತಿರುಗಿ ತಲಕಾಡನ್ನು ಎಡಕ್ಕೆ ಬಿಟ್ಟು ಮತ್ತೆ ಪೂರ್ವದತ್ತ ನೋಟ ಹರಿಯಿಸುವ ಕಾವೇರಿಯ ಈ ವರ್ತನೆಯಿಂದಾಗಿ ತಲಕಾಡಿನ ಸುತ್ತೆಲ್ಲ ಮರಳು ಹಾಯ್ದಿದೆ. ಪಾತ್ರದುದ್ದಕ್ಕೂ ತುಂಬಿ ತಂದ ಮರಳನ್ನೆಲ್ಲ ವಿಸರ್ಜಿಸಲು ಕಾವೇರಿಗೆ ಈ ತಿರುವು ಅತ್ಯಂತ ಅನುಕೂಲಕರ. ಬಲಗಡೆಯಿಂದ ಹರಿದು ಬರುವ ಸುವರ್ಣಾವತಿ ನದಿ ಸಂಗಮಿಸುವುದು ತಲಕಾಡಿನ ಬಳಿಯಲ್ಲೇ.

 ಮತ್ತೆ ಕಾವೇರಿಯ ಗತಿ ಬದಲಾಗುತ್ತದೆ. ಉತ್ತರಾಭಿಮುಖವಾಗಿ ಹರಿದು, ಮಂಡ್ಯ ಜಿಲ್ಲೆಯ ಗಡಿಗೆ ಸೋಕಿ ನಡೆದು, ಶಿವನಸಮುದ್ರ ಬಳಿಯಲ್ಲಿ ಕವಲೊಡೆದು, ಗಗನಚುಕ್ಕಿ ಭರಚುಕ್ಕಿಗಳಾಗಿ ಧುಮುಕಿ, ಮತ್ತೆ ಒಂದಾಗಿ ಸಾಗುತ್ತದೆ. ಇಲ್ಲಿ ಸಂಭವಿಸಿರುವುದು ಕಾವೇರಿಯ ಎರಡನೆಯ ದೊಡ್ಡ ದ್ವೀಪ.

 ಕೇವಲ 80 ಕಿಮೀ. ದೂರದಲ್ಲಿ 800 ಮೀ.ನಷ್ಟು ಕೆಳಕ್ಕಿಳಿಯುವ ಕಾವೇರಿ ನದಿ ಅನಂತರ ಬೆಂಗಳೂರು ಜಿಲ್ಲೆಯ ದಕ್ಷಿಣ ಅಂಚನ್ನು ಸೋಕಿ ಹರಿಯುತ್ತದೆ. ಸಮುದ್ರಮಟ್ಟಕ್ಕಿಂತ ಸುಮಾರು 750 ಮೀ. ಎತ್ತರವಿರುವ ಮೈಸೂರು ಪ್ರಸ್ಥಭೂಮಿಯ ಫಲವತ್ತಾದ ಪ್ರದೇಶದಲ್ಲಿ ಹಾವಿನಂತೆ ಹರಿದು ಅಗಲ ಹೆಚ್ಚಿಸಿಕೊಂಡು ನಿಧಾನವಾಗಿ ಸಾಗಿದ ನದಿಯ ಸ್ವಭಾವವೇ ಶಿವನಸಮುದ್ರದಿಂದಾಚೆಗೆ ವ್ಯತ್ಯಾಸವಾಗುತ್ತದೆ. ಮೈಸೂರಿನ ಪ್ರಸ್ಥಭೂಮಿಯಿಂದ ತಮಿಳುನಾಡಿನ ತಗ್ಗುಬಯಲಿಗೆ ಹರಿಯುವಾಗ ಅದರ ವೇಗ ಅತಿ ಹೆಚ್ಚು. ಅದರ ಪ್ರವಾಹದ ಗಾತ್ರವನ್ನು ಧರಿಸುವಷ್ಟು ವಿಸ್ತಾರವಾದ ಪಾತ್ರವಿಲ್ಲದ್ದರಿಂದ ನದಿ ಅತ್ಯಂತ ರಭಸವಾಗಿ ಹರಿಯುತ್ತದೆ. ಗಟ್ಟಿಬಂಡೆಗಳು ಜೇಡಿಮಣ್ಣಿನ ಹೆಪ್ಪುಗಳಂತೆ ಸವೆದು ಚಿಪ್ಪಾಗಿವೆ. ಅಲ್ಲಿ ಸಂಭವಿಸಿರುವ 12-75 ಮೀ. ಆಳದ ಹಲವಾರು ಗುಂಡಿಗಳು ನದಿಯ ಪ್ರತಾಪಕ್ಕೆ ನಿದರ್ಶನ. ಒಂದೆಡೆಯಲ್ಲಂತೂ ನದಿಯ ಪಾತ್ರ ಬಲು ಕಿರಿದು. ಹಿಂದೆ ಇದನ್ನು ಮೇಕೆ ದಾಟಬಹುದಾಗಿತ್ತಂತೆ. ಈಗ ಅದರ ಅಗಲ ಅಷ್ಟೊಂದು ಕಿರಿದಾಗಿಲ್ಲ. ಮೇಕೆದಾಟು ಎಂಬ ಹೆಸರಿನಿಂದಲೇ ಆ ಸ್ಥಳ ಪ್ರಸಿದ್ಧವಾಗಿದೆ.

 ಎತ್ತರ ನೆಲದಿಂದ ತಗ್ಗಿಗೆ ಜಾರುವ ಕಾವೇರಿ ಈ ಎಡೆಯಲ್ಲಿ ಅನೇಕ ಸಣ್ಣಪುಟ್ಟ ಹೊಳೆ ತೊರೆಗಳನ್ನು ಕೂಡಿಸಿಕೊಳ್ಳುತ್ತದೆ. ಇವುಗಳ ಪೈಕಿ ಕಣ್ವ ಮತ್ತು ಅರ್ಕಾವತಿಗಳು ದೊಡ್ಡವು. ಇವು ಬೆಂಗಳೂರು ಜಿಲ್ಲೆಯ ಮೂಲಕ ಹರಿದುಬರುತ್ತವೆ. ಇತರ ಹೊಳೆಗಳ ಪಾತ್ರಗಳನ್ನು ಏರಿಸಿಕೊಂಡು, ಇಕ್ಕಟ್ಟನ್ನು ಆದಷ್ಟು ನಿವಾರಿಸಿಕೊಂಡು ಸಾಗುವ ನದಿಯ ಈ ಪಾತ್ರ ಇತ್ತೀಚಿನದು. ಆದ್ದರಿಂದ ಕ್ರಮಪ್ರಾಪ್ತವಾದ ಹಾದಿ ಏರ್ಪಡಿಸಿಕೊಳ್ಳಲು ನದಿಗೆ ಇನ್ನೂ ಸಾಧ್ಯವಾಗಿಲ್ಲ.

 ಕಾವೇರಿಯಿಂದ ಮೈಸೂರಿಗೆ ಆಗಿರುವ ಉಪಕಾರ ಅಷ್ಟಿಷ್ಟಲ್ಲ. ಅದರ ಹರಿವಿನ ಉದ್ದಕ್ಕೂ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.  ನದಿಯ ಎರಡೂ ದಂಡೆಗಳಲ್ಲಿ ಮೆಟ್ಟಿಲು ಮೆಟ್ಟಿಲಾಗಿ ನೀರಾವರಿಯ ಸೌಲಭ್ಯ ಒದಗಿಸಿರುವ ಕಾಲುವೆಗಳ ಒಟ್ಟು ಉದ್ದ 1,900 ಕಿಮೀ. ಇಲ್ಲಿಯ ಅಣೆಕಟ್ಟುಗಳಲ್ಲಿ ಕೆಲವು ಅತ್ಯಂತ ಹಳೆಯವು. ಇವುಗಳಲ್ಲಿ ಕೆಲವು 1,000 ವರ್ಷಗಳ ಹಿಂದೆ ಕಟ್ಟಿದವು.

 ಕನ್ನಂಬಾಡಿಯ ಬಳಿ ಕಟ್ಟಿರುವ ಕೃಷ್ಣರಾಜಸಾಗರ ಕಟ್ಟಿ ಈಚಿನದು. ನದಿಯ ಪಾತ್ರದಿಂದ 38 ಮೀ, ಎತ್ತರವಿರುವ ಕಟ್ಟೆಯ ಉದ್ದ 1,996ಮೀ. ಜಲಾಶಯದಲ್ಲಿ ಶೇಖರಿಸಬಹುದಾದ ನೀರಿನ ಪರಿಮಾಣ 1,17,50,00,000 ಘನ ಮೀಟರುಗಳು. ಶಿವನಸಮುದ್ರದ ಬಳಿಯ ವಿದ್ಯುತ್ಪಾದನ ಕೇಂದ್ರಕ್ಕೆ ವರ್ಷವಿಡೀ ನೀರು ಒದಗಿಸುವುದೂ ಮೈಸೂರು ಮಂಡ್ಯಗಳಲ್ಲಿ ಹೆಚ್ಚಿನ ನೀರಾವರಿ ಸೌಲಭ್ಯ ಕಲ್ಪಿಸುವುದೂ ಕೃಷ್ಣರಾಜಸಾಗರ ಕಟ್ಟೆಯ ನಿರ್ಮಾಣದ ಉದ್ದೇಶ.

 ಶಿವನಸಮುದ್ರದ ಬಳಿಯಲ್ಲಿ ನಿರ್ಮಿಸಲಾಗಿರುವ ವಿದ್ಯುತ್ಪಾದನ ಕೇಂದ್ರ (1902) ಇಡೀ ಏಷ್ಯಾದಲ್ಲೇ ಅತ್ಯಂತ ಹಳೆಯ ದೊಡ್ಡ ವಿದ್ಯುತ್‍ಕೇಂದ್ರ.

 ಮೈಸೂರಿನ ಆಗ್ನೇಯದ ಅಂಚಿನ ಉದ್ದಕ್ಕೂ ಹರಿದು, ಹೊಗೇನಕಲ್ಲಿನ ಬಳಿ ಮತ್ತೆ ಧುಮುಕಿ, ಕೊನೆಗೆ ಮೈಸೂರನ್ನು ಬೀಳ್ಕೊಂಡು ತಮಿಳುನಾಡಿಗೆ ತಿರುಗುವ ವೇಳೆಗೆ ನದಿಯ ದಿಕ್ಕು ಎರಡು ಬಾರಿ ಬದಲಾಗುತ್ತದೆ. ಹೊಗೇನಕಲ್ಲಿನ ಬಳಿ ದಕ್ಷಿಣಾಭಿಮುಖ ಮತ್ತು ಬೋಡಮಲೈ ಬೆಟ್ಟದ ಬಳಿ ಪೂರ್ವಾಭಿಮುಖ. ಸ್ವಲ್ಪ ದೂರ ಹೀಗೆ ಸಾಗುವಲ್ಲಿ ಪುನಃ ಅದು ದಕ್ಷಿಣಕ್ಕೆ ಬಾಗುತ್ತದೆ.

 ಪಾಲಾರಿನ ನೀರನ್ನೂ ಒಳಗೊಂಡು ಮುಂದುವರಿಯುವ ಕಾವೇರಿಗೆ ಮೆಟ್ಟೂರಿನ ಬಳಿಯಲ್ಲಿ ಒಂದು ಎತ್ತರ ಕಟ್ಟೆ ಕಟ್ಟಲಾಗಿದೆ. 5,300† ಉದ್ದ 176† ಎತ್ತರದ ಕಟ್ಟೆಯಿದು. ವಿದ್ಯುತ್ಪಾದನೆಯೂ ನೀರಾವರಿ ಸೌಲಭ್ಯ ಕಲ್ಪನೆಯೂ ಇದರ ಉದ್ದೇಶ. ಮೆಟ್ಟೂರು ಜಲಾಶಯದಿಂದಾಗಿ ತಂಜಾವೂರಿನ ಕಾವೇರಿಬಯಲಿಗೆ ನೀರು ಸರಬರಾಜಾಗುವ ಭರವಸೆ ಏರ್ಪಟ್ಟಿದೆ.

 ಮೆಟ್ಟೂರಿನಿಂದ ಮುಂದೆ ಭವಾನಿಯವರೆಗೆ ದಕ್ಷಿಣ ದಿಕ್ಕಿನಲ್ಲಿ ಹರಿಯುವ ಕಾವೇರಿಗೆ ಆ ಎಡೆಯಲ್ಲಿ ಪಶ್ಚಿಮದಿಂದ ಹರಿದು ಬರುವ ಭವಾನಿ ನದಿ ಸಂಗಮಿಸುತ್ತದೆ. ಮತ್ತೆ ಪೂರ್ವಾಭಿಮುಖವಾಗಿ ಹರಿಯುವ ಕಾವೇರಿಯ ಚರ್ಯೆಯೇ ಮುಂದೆ ಬದಲಾಗುತ್ತದೆ. ಸಮುದ್ರ ಹತ್ತಿರವಾದಂತೆಲ್ಲ ಅದರದು ಗಂಭೀರ ಗಮನ, ಪಾತ್ರವೂ ವಿಸ್ತಾರ. ಅದರ ದಡದುದ್ದಕ್ಕೂ ಹಲವರು ಪಟ್ಟಣಗಳು ಮಾಲೆಯಾಗಿ ಹಬ್ಬಿವೆ. ಕೊಯಮತ್ತೂರಿನ ಆಲಂಬಾಡಿಯ ಬಳಿ ನದಿಯ ಪ್ರವಾಹದ ನಡುವೆ ಅಡ್ಡ ಬರುವ ಬಂಡೆಗೆ ತಾಕಿ ತುಂತುರು ಹನಿಗಳನ್ನು ನಿರಂತರವಾಗಿ ಚಿಮ್ಮಿಸುತ್ತದೆ. ತಿರುಚ್ಚಿರಪಳ್ಳಿಯ ಪ್ರಸಿದ್ಧವಾದ ಬಂಡೆಯನ್ನು ದಾಟಿದ ಮೇಲೆ ಕಾವೇರಿ ಮತ್ತೆ ಕವಲೊಡೆಯುತ್ತದೆ. ಇದರಿಂದ ಸಂಭವಿಸಿರುವ ದ್ವೀಪವೇ ಶ್ರೀರಂಗಂ ಎರಡು ಕವಲುಗಳೂ ತಿರುಚ್ಚಿರಪ್ಪಳ್ಳಿಯಿಂದ 16 ಕಿಮೀ. ದೂರದಲ್ಲಿ ಮತ್ತೆ ಸೇರುತ್ತವೆ. ಮಹಾ ಅಣೆಕಟ್ಟೆಯ (ಗ್ರ್ಯಾಂಡ್ ಅಣಿಕಟ್) ನಿರ್ಮಾಣವಾಗಿರುವುದು ಈ ಸ್ಥಳದಲ್ಲಿ. ತಂಜಾವೂರು ಜಿಲ್ಲೆಯ ಮಹಾ ನೀರಾವರಿ ವ್ಯವಸ್ಥೆಗೆ ಇದೇ ಮೂಲ. ಇಲ್ಲಿಯದು ಭಾರತದಲ್ಲೇ ಅತ್ಯಂತ ಪ್ರಾಚೀನ ನೀರಾವರಿ ವ್ಯವಸ್ಥೆ (2ನೆಯ ಶತಮಾನ). ಕುಂಭಕೋಣಂ, ಮಯೂರಂ, ಶಿರ್ಕಾ¾ô ಮತ್ತು ನನ್ನಿಲಂ ತಾಲ್ಲೂಕುಗಳಿಗೂ ತಂಜಾವೂರು, ಮನ್ನಾರ್‍ಗುಡಿ, ತಿರುತ್ತುರೈಪುಂಡಿ ಮತ್ತು ನಾಗಪಟ್ಟಿಣಂ ತಾಲ್ಲೂಕುಗಳ ಭಾಗಗಳಿಗೂ ಕಾವೇರಿಯ ನೀರಾವರಿ ಸೌಲಭ್ಯ ಒದಗಿದೆ. ತಮಿಳುನಾಡಿನ ಬತ್ತದ ಕಣಜದ ಪ್ರದೇಶವಿದು.

ಮುಖಜಭೂಮಿಯ ಪ್ರದೇಶದಲ್ಲಿ ಕಾವೇರಿ ಎರಡು ಮುಖ್ಯ ಕವಲುಗಳಾಗಿ ಒಡೆಯುತ್ತದೆ. ಉತ್ತರದ್ದು ಕೊಲ್ಲಡಂ, ದಕ್ಷಿಣದ ಕವಲು ಕಾವೇರಿಯಂದೇ ಕರೆಸಿಕೊಳ್ಳುತ್ತದೆ. ತಂಜಾವೂರಿನ ಮುಖಜಭೂಮಿ ಪ್ರದೇಶದಲ್ಲಿ ನೀರಾವರಿಗೆ ಬಳಸಿ ಕೊಂಡು ಉಳಿದ ನೀರನ್ನು ಉತ್ತರದ ಶಾಖೆಯಾದ ಕೊಲ್ಲಡಂಗೆ ಬಿಡಲಾಗುತ್ತದೆ. ಈಶಾನ್ಯಭಿಮುಖವಾಗಿ ಹರಿಯುವ ಈ ಕವಲು ಪೋರ್ಟೊನೋವೋ ಬಳಿ ಕಡಲು ಸೇರುತ್ತದೆ. ಕಾವೇರಿಯ ಎರಡು ಶಾಖೆಗಳು ಸಮುದ್ರದಲ್ಲಿ ಸಂಗಮವಾಗುವ ಮುನ್ನ ಹಲವಾರು ಕವಲುಗಳಾಗಿ ಒಡೆದು ನೀರಾವರಿಯ ಬಲೆಯನ್ನೇ ಹೆಣೆದಿವೆ. ಇದರ ನೀರಿನ ಬಹುಭಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಬೇರಾವ ನದಿಯನ್ನೂ ಇಷ್ಟೊಂದು ಸಮರ್ಪಕವಾಗಿ ನೀರಾವರಿಗೆ ಉಪಯೋಗಿಸಿಕೊಂಡಿಲ್ಲವೆಂದು ಹೇಳಲಾಗಿದೆ.

 ಕೊಡಗಿನ ಪ್ರದೇಶದಲ್ಲಿ ಸಣ್ಣ ತೊರೆಯಾಗಿ ಉಗಮಹೊಂದಿ, ತಾರುಣ್ಯದ ಆರಂಭದಿಂದಲೇ ಸುತ್ತಣ ಸೀಮೆಯ ಸಂಪತ್ತಿಗೆ ಕಾರಣವಾಗಿ, ಶಿವನಸಮುದ್ರದಲ್ಲಿ ಪರಿಧಿಯನ್ನು ಲಂಘಿಸುವಾಗ ವಿದ್ಯುತ್ತನ್ನು ಚಿಮ್ಮಿಸಿ, ತಮಿಳುನಾಡಿನಲ್ಲಿ ತುಂಬು ಚೆಲುವು ತಳೆದು ಸಮುದ್ರವನ್ನು ಸಂಗಮಿಸಿದ ಕಾವೇರಿಯ ಉಪಯುಕ್ತತೆಯಿಂದಾಗಿ ಅದನ್ನು ಜನರು ಪವಿತ್ರನದಿಯೆಂದು ಪೂಜಿಸುತ್ತಾರೆ.

ಪುರಾಣಗಳಲ್ಲಿ : ಕಾವೇರಿ ನದಿಯ ಉಗಮದ ಕತೆ ಅಗ್ನಿಪುರಾಣದಲ್ಲಿ ಬಂದಿದೆ. ಪೂರ್ವಕಾಲದಲ್ಲಿ ಕವೇರನೆಂಬ ಒಬ್ಬ ರಾಜ ಇದ್ದ. ಆತ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸನ್ನಾಚರಿಸಿದ. ಬ್ರಹ್ಮ ಅವನಿಗೆ ಪ್ರತ್ಯಕ್ಷನಾಗಿ, ಅವನಿಗೆ ಮೋಕ್ಷವುಂಟಾಗಬೇಕಾದರೆ ಇನ್ನು ಸ್ವಲ್ಪ ಕಾಲ ಕಾಯಬೇಕೆಂದೂ ಅಷ್ಟರವರೆಗೆ ಆತ ಬ್ರಹ್ಮನ ಮಗಳಾದ ವಿಷ್ಣುಮಾಯೆಯನ್ನು ತನ್ನ ಮಗಳಾಗಿಟ್ಟುಕೊಂಡು ಸಲಹಬೇಕೆಂದೂ ಹೇಳಿದ. ಬ್ರಹ್ಮನ ಇಚ್ಛೆಯಂತೆ ಕವೇರ ರಾಜ ವಿಷ್ನುಮಾಯೆಯನ್ನು ತನ್ನ ಅರಮನೆಯಲ್ಲಿ ಸಾಕಿದ. ವಿಷ್ಣುವಿನ ಅಂಶದವಳಾದ ವಿಷ್ಣುಮಾಯೆ ಬೆಳೆದು ದೊಡ್ಡವಳಾದ ಮೇಲೆ ತಪಸ್ಸು ಮಾಡಲು ಹಿಮಾಲಯ ಪರ್ವತಕ್ಕೆ ಹೋದಳು. ಆಗ ಕವೇರ ರಾಜನಿಗೆ ಮೋಕ್ಷ ಲಭ್ಯವಾಯಿತು. ವಿಷ್ಣುಮಾಯೆಯ ತಪಸ್ಸಿಗೆ ವಿಷ್ಣು ಸಂಪ್ರೀತನಾಗಿ ಅವಳಿಗೆ ಪ್ರತ್ಯಕ್ಷನಾದ. ಅವಳಿಂದ ಜನಕ್ಕೆ ಉಪಯೋಗವಾಗಬೇಕೆಂಬ ಉದ್ದೇಶದಿಂದ ಅವಳು ಎರಡು ರೂಪಗಳನ್ನು ತಳೆಯುವಂತೆ-ಒಂದು ರೂಪದಲ್ಲಿ ಅವಳು ಸಹ್ಯ ಪರ್ವತದಲ್ಲಿ ನದಿಯಾಗಿ ಹುಟ್ಟಿ ಹರಿಯುವಂತೆ ಮತ್ತು ಇನ್ನೊಂದು ರೂಪದಲ್ಲಿ ಲೋಪಾಮುದ್ರೆಯೆಂಬ ಹೆಸರು ತಳೆದು ಅಗಸ್ತ್ಯ ಋಷಿಯ ಪತ್ನಿಯಾಗುವಂತೆ-ವಿಷ್ಣು ಅವಳಿಗೆ ವರ ನೀಡಿದ. ವಿಷ್ಣುಮಾಯೆಗೆ ವಿಷ್ಣು ವರ ನೀಡಿದ ಸಮಯದಲ್ಲಿ ಅಗಸ್ತ್ಯ ಋಷಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಬ್ರಹ್ಮ ಅಗಸ್ತ್ಯನಿಗೆ ಪ್ರತ್ಯಕ್ಷನಾಗಿ, ಲೋಪಾಮುದ್ರೆಯನ್ನು ವಿವಾಹವಾಗುವಂತೆ ಅವನಿಗೆ ಹೇಳಿದ. ಬ್ರಹ್ಮನ ಅಣತಿಯಂತೆ ಅಗಸ್ತ್ಯ ಲೋಪಾಮುದ್ರೆಯ ರೂಪ ತಳೆದಿದ್ದ ವಿಷ್ಣುಮಾಯೆಯಿದ್ದಲ್ಲಿಗೆ ಬಂದು ಆಕೆಯನ್ನು ವಿವಾಹವಾದ.

ಅಗಸ್ತ್ಯ ಲೋಪಾಮುದ್ರೆಯನ್ನು ವಿವಾಹವಾದ ಸ್ವಲ್ಪ ಸಮಯದ ಅನಂತರ ಅವನಿಗೆ ದಕ್ಷಿಣ ಭಾರತದಲ್ಲಿ ನೀರಿನ ಕೊರತೆಯಿದೆಯೆಂದು ತಿಳಿಯಿತು. ಲೋಪಾಮುದ್ರೆ ನೀರಿನ ರೂಪ ತಾಳಿ ತನ್ನ ಕಮಂಡಲದಲ್ಲಿರುಂತೆ ಅಗಸ್ತ್ಯ ಕೇಳಿಕೊಂಡ. ಲೋಪಾಮುದ್ರೆ ಹಾಗೆಯೇ ಮಾಡಿದಳು. ಅಗಸ್ತ್ಯ ಕಮಂಡಲವನ್ನು ಹಿಡಿದುಕೊಂಡು ಸಹ್ಯಪರ್ವತಶ್ರೇಣಿಯ ಬ್ರಹ್ಮಗಿರಿಗೆ ಬಂದ.

ಬ್ರಹ್ಮ ಆ ಗಿರಿಯಲ್ಲಿ ವಿಷ್ಣುವನ್ನು ಕುರಿತು ತಪಸ್ಸು ಮಾಡುತ್ತಿದ್ದುದರಿಂದ ಅದಕ್ಕೆ ಬ್ರಹ್ಮಗಿರಿಯೆಂದು ಹೆಸರುಬಂದಿದೆ. ಈ ಸ್ಥಳದಲ್ಲಿ ವಿಷ್ಣು ಆಮಲಕ ಅಥವಾ ನೆಲ್ಲಿ ಮರದ ರೂಪ ತಳೆದಿದ್ದ. ಆಮಲಕ ಮರದ ರೂಪದಲ್ಲಿದ್ದ ವಿಷ್ಣುವನ್ನು ಪೂಜಿಸಲು ಕೈಲಾಸದಲ್ಲಿ ಹರಿಯುತ್ತಿದ್ದ ವಿರಜಾನದಿಯ ನೀರನ್ನು ಬ್ರಹ್ಮ ತನ್ನ ಶಂಖದಲ್ಲಿ ತಂದು ಅದನ್ನು ಆ ಮರಕ್ಕೆ ಎರೆಯುತ್ತಿದ್ದಾಗ ಅಗಸ್ತ್ಯ ಋಷಿ ಅಲ್ಲಿಗೆ ಬಂದು ತನ್ನ ಕಮಂಡಲವನ್ನು ಒಂದು ದೊಡ್ಡ ಚಪ್ಪಟೆ ಕಲ್ಲಿನ ಮೇಲಿಟ್ಟು ಸ್ನಾನಕ್ಕಾಗಿ ಸ್ವಲ್ಪ ದೂರ ಹೋದ. ಅದೇ ಸಮಯದಲ್ಲಿ ಬಿರುಗಾಳಿ ಬೀಸಿತು. ಕಲ್ಲಿನ ಮೇಲೆ ಇಟ್ಟಿದ್ದ ಕಮಂಡಲ ಮಗುಚಿಕೊಂಡಿತು. ಅದರಲ್ಲಿದ್ದ ನೀರು ಹರಿದು ವಿರಜಾ ನದಿಯ ನೀರನ್ನು ಸೇರಿಕೊಂಡು ಕಾವೇರಿ ತೀರ್ಥಕುಂಡಿಗೆಯಿಂದ ನದಿಯಾಗಿ ಹರಿಯಿತು. ನದಿಯಾಗಿ ಹರಿದ ಲೋಪಾಮುದ್ರೆ ವಿಷ್ಣುಮಾಯೆಯಾಗಿದ್ದಾಗ ಕವೇರ ಅವಳನ್ನು ಸಾಕಿದ್ದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂತು.

ಸ್ಕಾಂದಪುರಾಣದಲ್ಲಿ ಕಾವೇರಿ ನದಿಯ ಹುಟ್ಟಿನ ಬಗ್ಗೆ ಎರಡು ಕಥೆಗಳುಂಟು. ಮೊದಲೆನೆಯ ಕಥೆ ಹೀಗಿದೆ: ಭಾರತದ ಮಧ್ಯದಲ್ಲಿರುವ ವಿಂಧ್ಯಪರ್ವತ ಒಮ್ಮೆ ಸೂರ್ಯನ ಎತ್ತರಕ್ಕೇರಬೇಕೆಂದು ಬಯಸಿ ಬೆಳೆಯುತ್ತ ಸಾಗಿದ; ಸೂರ್ಯನ ಮತ್ತು ನಕ್ಷತ್ತಗಳ ದಾರಿಗೆ ಅಡ್ಡ ಬಂದ. ಅವುಗಳಿಂದ ಬರುವ ಬೆಳಕಿಗೂ ಅಡಚಣೆಯುಂಟಾಯಿತು. ಈ ಬೆಳವಣಿಗೆಯನ್ನು ತಡೆಹಿಡಿದು ಅವನನ್ನು ತಗ್ಗಿಸಲು ದೇವತೆಗಳು ಅಗಸ್ತ್ಯನ ಸಹಾಯವನ್ನು ಕೋರಿದರು. ಅಗಸ್ತ್ಯ ಒಪ್ಪಿ, ಅದಕ್ಕೆ ಅವಶ್ಯವಿದ್ದ ಆಧ್ಯಾತ್ಮಿಕ ಶಕ್ತಿಯನ್ನು ತನಗೆ ಕೊಡುವಂತೆ ಈಶ್ವರನನ್ನು ಕುರಿತು ತಪಸ್ಸು ಮಾಡಿದ ಈಶ್ವರನ ಅನುಗ್ರಹ ಲಭ್ಯವಾಯಿತು. ಇಷ್ಟಬಂದಲ್ಲಿ ದೇವತಾರ್ಚನೆ ಮಾಡಲು ಅವನೊಡನೆ ನೀರು ಯಾವಾಗಲೂ ಇರುವಂತೆ ವರ ನೀಡಿ,  ಅವನ ಕಮಂಡಲದಲ್ಲಿರುವಂತೆ ಕೈಲಾಸಪರ್ವತದಲ್ಲಿ ಹರಿಯುತ್ತಿದ್ದ ಕಾವೇರಿಗೆ ಆಜ್ಞಾಪಿಸಿದ. ಆಗ ಕಾವೇರಿ ನದಿ ಅಗಸ್ತ್ಯನ ಕಮಂಡಲವನ್ನು ಸೇರಿದಳು. ಅಗಸ್ತ್ಯ ಅದನ್ನು ಹಿಡಿದುಕೊಂಡು ಹಿಮಾಲಯ ಪ್ರದೇಶದಿಂದ ಭಾರತಕ್ಕೆ ಹೊರಟು ವಿಂಧ್ಯನ ಹತ್ತಿರ ಬಂದಾಗ ಆ ಪರ್ವತ ಅಗಸ್ತ್ಯನಿಗೆ ಭಕ್ತಿಯಿಂದ ಪೊಡಮಟ್ಟಿತು. ತಾನು ದಕ್ಷಿಣಭಾರತಕ್ಕೆ  ಶಾಂತ ಮನಸ್ಸಿನಿಂದ ಹೋಗಬೇಕಾಗಿರುವುದರಿಂದ ತಾನು ಹಿಂದಕ್ಕೆ ಬರುವವರೆಗೆ ವಿಂಧ್ಯ ಮೇಲಕ್ಕೇಳದೆ ನಮಸ್ಕಾರದ ಭಂಗಿಯಲ್ಲೇ ಇರಬೇಕೆಂದು ಅಗಸ್ತ್ಯ ಹೇಳಿ ದಕ್ಷಿಣಭಾರತಕ್ಕೆ ಹೋದ, ಅನಂತರ ಆತ ಉತ್ತರಭಾರತಕ್ಕೆ ಹಿಂದಿರುಗಲೇ ಇಲ್ಲ. ಈ ಕಾರಣದಿಂದ ವಿಂಧ್ಯ ಪರ್ವತ ಮಲಗಿದ ಸ್ಥಿತಿಯಲ್ಲೇ ಇದೆಯೆಂದು ಪುರಾಣದಲ್ಲಿ ಹೇಳಿದೆ. ಅಗಸ್ತ್ಯ ದಕ್ಷಿಣ ಭಾರತದಲ್ಲಿ ಸಹ್ಯ ಪರ್ವತದ ಬ್ರಹ್ಮಗಿರಿಗೆ ಬಂದು ಅಲ್ಲಿ ತಪಸ್ಸು ಮಾಡುತ್ತಿದ್ದ. ಆ ಸಮಯದಲ್ಲಿ ಸೂರಪದ್ಮನೆಂಬ ಒಬ್ಬ ಅಸುರ ತನ್ನ ತಪಶ್ಯಕ್ತಿಯಿಂದ ಅಲ್ಲಿ ಮಳೆ ಬೀಳುವುದನ್ನು ತಡೆ ಹಿಡಿದಿದ್ದ. ಇದರಿಂದ ಇಂದ್ರನಿಗೆ ಸಂಕಟವಾಯಿತು. ದಕ್ಷಿಣ ದೇಶದಲ್ಲಿ ಯಥೇಚ್ಛವಾಗಿ ನೀರಿರುವಂತೆ ಮಾಡಬೇಕೆಂದು ಗಣಪತಿಯನ್ನು ಪ್ರಾರ್ಥಿಸಿಕೊಂಡ. ಗಣಪತಿ ಕಾಗೆಯ ರೂಪವನ್ನು ತಾಳಿ ಬಂದು ಅಗಸ್ತ್ಯ ತನ್ನ ಪಕ್ಕದಲ್ಲಿ ಕಲ್ಲಿನ ಮೇಲೆ ಇಟ್ಟಿದ್ದ ಕಮಂಡಲವನ್ನು ಮಗುಚಿಹಾಕಿದ. ಅದರಲ್ಲಿದ್ದ ಕಾವೇರಿ ನದಿ ಕೂಡಲೇ ಅಲ್ಲಿಂದ ಹರಿಯ ತೊಡಗಿತು.

ಸ್ಕಾಂದಪುರಾಣದಲ್ಲಿರುವ ಎರಡನೆಯ ಕಥೆ ಹೀಗಿದೆ : ಮಕ್ಕಳಿಲ್ಲದ ತನಗೆ ಮಕ್ಕಳಾಗಬೇಕೆಂದು ಕವೇರ ಮುನಿ ಬ್ರಹ್ಮಗಿರಿಯಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಆಗ ಬ್ರಹ್ಮ ಅವನ ತಪಸ್ಸಿಗೆ ಮೆಚ್ಚಿ ಅವನಿಗೆ ಪ್ರತ್ಯಕ್ಷನಾಗಿ ತನ್ನ ಸಾಕು ಮಗಳಾದ ಲೋಪಾಮುದ್ರೆಯನ್ನು ಅವನಿಗೆ ಕೊಟ್ಟ. ಅಂದಿನಿಂದ ಲೋಪಮುದ್ರೆ ಕವೇರನ ಮಗಳಾಗಿ ಕಾವೇರಿಯೆಂಬ ಹೆಸರು ಪಡೆದಳು. ಕಾವೇರಿ ತನ್ನ ಸಾಕು ತಂದೆಗೆ ಮೋಕ್ಷವುಂಟಾಗಬೇಕೆಂದು ಇಚ್ಛಿಸಿ ತಾನು ನದಿಯಾಗಿ ಹರಿಯುವಂತೆ ಮತ್ತು ಆಗ ತನ್ನಲ್ಲಿ ಸ್ನಾನ ಮಾಡಿದವರು ತಮ್ಮ ಎಲ್ಲ ಪಾಪಗಳಿಂದ ಮುಕ್ತರಾಗುಂತೆ ವರವನ್ನು ಕೊಡಬೇಕೆಂದು ಬ್ರಹ್ಮಗಿರಿಯಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಳು. ಬ್ರಹ್ಮ ಅವಳ ತಪಸ್ಸಿಗೆ ಮೆಚ್ಚಿ ಅವಳು ಕೇಳಿದ ವರವನ್ನು ನೀಡಿದ. 

ಅವಳು ಬ್ರಹ್ಮಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾಗ ಅಲ್ಲಿಗೆ ಅಗಸ್ತ್ಯ ಋಷಿ ಬಂದ. ಕಾವೇರಿಯ ತಪಸ್ಸು ಮುಗಿದ ಮೇಲೆ ಅವಳನ್ನು ಕಂಡು, ಅವಳು ತನ್ನ ಪತ್ನಿಯಾಗಬೇಕೆಂದು ಕೇಳಿಕೊಂಡ. ಅವಳಿಗೆ ತಾನು ನದಿಯಾಗಿ ಹರಿದು ಜನರ ಪಾಪಗಳನ್ನು ಪರಿಹರಿಸಬೇಕೆಂಬ ಇಚ್ಛೆ ಪ್ರಬಲವಾಗಿದ್ದರೂ ಅಗಸ್ತ್ಯನ ಕೋರಿಕೆಯನ್ನು ನಿರಾಕರಿಸಲಾರದೆ ಒಂದು ಷರತ್ತಿನಿಂದ ಅವನನ್ನು ವಿವಾಹವಾಗಲು ಒಪ್ಪಿದಳು. ಮದುವೆಯಾದ ಮೇಲೆ ಎಂದೂ ಅವಳನ್ನು ಅಗಸ್ತ್ಯ ಒಂಟಿಯಾಗಿ ಬಿಟ್ಟಿರಕೂಡದೆಂದೂ ತಪ್ಪಿದಲ್ಲಿ ನದಿಯಾಗಿ ಹರಿದು ಹೋಗಲು ಅವಳಿಗೆ ಸ್ವಾತಂತ್ರ್ಯ ಇರತಕ್ಕದ್ದೆಂದೂ ಷರತ್ತು ವಿಧಿಸಿದಳು. ಅಗಸ್ತ್ಯ ಒಪ್ಪಿ ಆಕೆಯನ್ನು ವಿವಾಹವಾದ. ನೀರಿನ ರೂಪದಲ್ಲಿ ಕಾವೇರಿಯಿದ್ದ ಕಮಂಡಲವನ್ನು ಅಗಸ್ತ್ಯ  ಒಮ್ಮೆ ಶಿಷ್ಯರ ಕೈಯಲ್ಲಿ ಕೊಟ್ಟು ಕನ್ನಿಕಾನದಿಗೆ ಸಂಧ್ಯೋಪಾಸನೆಗೆ ಹೋಗಿದ್ದಾಗ, ಅಗಸ್ತ್ಯ ತನಗೆ ಕೊಟ್ಟ ಮಾತಿಗೆ ತಪ್ಪಿದನೆಂದು ಕಾವೇರಿ ಕಮಂಡಲದಿಂದ ಬ್ರಹ್ಮಗಿರಿಯ ತೀರ್ಥಕುಂಡಿಗೆಗೆ ಜಿಗಿದು ಅಲ್ಲಿಂದ ನದಿಯಾಗಿ ಪ್ರವಹಿಸಿದಳು. ಆಗ ಅಗಸ್ತ್ಯನ ಶಿಷ್ಯರು ಅವಳು ನದಿಯಾಗಿ ಹರಿಯುವುದನ್ನು ತಡೆದರು. ಅವಳು ತೀರ್ಥಕುಂಡಿಗೆಯ ಮುಂದಿರುವ ತೀರ್ಥಕೊಳದ ಬಲಭಾಗದ ಇಳಿಜಾರಿನಲ್ಲಿ ಕಲ್ಲುಬಂಡೆಯ ಅಡಿಭಾಗದಲ್ಲಿ ಹರಿದು ಕೆಳಗೆ ಕಾಣಿಸಿಕೊಂಡಳು. ಅಲ್ಲಿಂದ ಭಾಗಮಂಡಲಕ್ಷೇತ್ರ ತಲಪಿದಾಗ ಮೊದಲನೆಯ ಉಪನದಿ ಕನ್ನಿಕ ಕಾವೇರಿಯನ್ನು ಸೇರಿಕೊಂಡಳು. ತನ್ನ ಪತ್ನಿ ತನಗೆ ತಿಳಿಸದೆ ನದಿಯಾಗಿ ಹರಿದುದಕ್ಕೆ ಅಗಸ್ತ್ಯನಿಗೆ ಕೋಪ ಬಂತು. ಅಷ್ಟರಲ್ಲಿ ಬ್ರಹ್ಮ ಅಗಸ್ತ್ಯನಲ್ಲಿಗೆ ಬಂದು ಅವನನ್ನು ಸಮಾಧಾನ ಪಡಿಸಿದ ಅನಂತರ ಅಗಸ್ತ್ಯ ನದಿಯಾಗಿ ಹರಿಯುತ್ತಿದ್ದ ಕಾವೇರಿಯನ್ನು ಬ್ರಹ್ಮಗಿರಿಯಿಂದ ಸುಮಾರು ಇಪ್ಪತ್ತು ಮೈಲಿಗಳ ದೂರದಲ್ಲಿರುವ ಬಲಮುರಿಯಲ್ಲಿ ಸಂಧಿಸಿ ಅವಳು ಮತ್ತೆ ತನ್ನ ಪತ್ನಿಯಾಗಿರುವಂತೆ ಕೇಳಿಕೊಂಡ. ಈಶ್ವರ ತನಗೆ ಕೊಟ್ಟ ವರದಂತೆ ಒಂದು ರೂಪದಲ್ಲಿ ಸ್ತ್ರೀಯಾಗಿದ್ದು ಅಗಸ್ತ್ಯನ ಪತ್ನಿಯಾಗಿರಲೂ ಇನ್ನೊಂದು ರೂಪದಲ್ಲಿ ನದಿಯಾಗಿ ಹರಿಯಲೂ ಕಾವೇರಿ ಒಪ್ಪಿದಳು. ಪೂರ್ವ ಸಮುದ್ರವನ್ನು ಸೇರುವವರೆಗೆ ದಾರಿಯಲ್ಲಿ ಕಾವೇರಿ ಯಾವ ಯಾವ ಸ್ಥಳಗಳ ಮತ್ತು ಕ್ಷೇತ್ರಗಳ ಮೂಲಕ ಹರಿದು ಹೋಗಬೇಕೆಂಬುದನ್ನು ಅಗಸ್ತ್ಯ ತಿಳಿಸಿದ. ಕಾವೇರಿ ದೇವತೆಯನ್ನು ಕೊಡಗರು ತಮ್ಮ ಕುಲದೇವತೆಯೆಂದು ನಂಬಿ ಪೂಜಿಸುತ್ತಾರೆ. ಕಾವೇರಿ ದೇವತೆಯ ವರದಿಂದ ಕೊಡಗಿನಲ್ಲಿ ವ್ಯವಸಾಯಕ್ಕೆ ಅಗತ್ಯವಾದ ಮಳೆಯಾಗುತ್ತದೆಂದೂ ಕೊಡಗಿನವರ ಮುಖ್ಯ ಆಹಾರಧಾನ್ಯವಾದ ಬತ್ತದ ಬೆಳೆ ಸಮೃದ್ದವಾಗಿ ಬೆಳೆಯುತ್ತದೆಂದೂ ಕೊಡಗಿನ ಜನ ನಂಬಿದ್ದಾರೆ.

ಕಾವೇರಿಯ ಕ್ಷೇತ್ರಗಳು : ಉಗಮದಿಂದ ಸಂಗಮದವರೆಗೂ ಕಾವೇರಿಯ ದಂಡೆಯ ಮೇಲೆ ಅನೇಕ ಪುಣ್ಯಕ್ಷೇತ್ರಗಳಿವೆ. ಮೊಟ್ಟಮೊದಲನೆಯ ಸ್ಥಳ ತಲಕಾವೇರಿ ವರ್ಷವಿಡೀ ಕಾವೇರಿನದಿಯಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿಸುವುದು ಪುಣ್ಯಕರವೆಂದು ಜನರು ನಂಬಿದ್ದರೂ ತುಲಮಾಸದಲ್ಲಿ ಕಾವೇರಿ ಸ್ನಾನ ಮಾಡುವುದರಿಂದ ಹೆಚ್ಚು ಪುಣ್ಯವುಂಟಾಗುತ್ತದೆಂಬುದು ಜನರಿಗೆ ಪುರಾಣದಿಂದ ಪ್ರಾಪ್ತವಾದ ನಂಬಿಕೆ. ತುಲಾಸಂಕ್ರಮಣದ ದಿವಸ ಕಾವೇರಿ ತೀರ್ಥ ಆ ಮುಹೂರ್ತಕ್ಕೆ ಸರಿಯಾಗಿ ತೀರ್ಥ ಕುಂಡಿಗೆಯಲ್ಲಿ ಉಕ್ಕಿ ಹರಿಯುತ್ತದೆ. ಆ ಸಮಯಕ್ಕೆ ಸರಿಯಾಗಿ ತೀರ್ಥಕುಂಡಿಗೆಯ ಇಬ್ಬದಿಗಳಲ್ಲಿ ನಿಂತಿರುವ ಅರ್ಚಕರು ತಾಮ್ರದ ತಂಬಿಗೆಗಳಲ್ಲಿ ತೀರ್ಥಕುಂಡಿಗೆಯ ತೀರ್ಥವನ್ನು ತುಂಬಿಸಿಕೊಂಡು ಅದರ ಮುಂದಿನ ಕೊಳದಲ್ಲಿ ಸ್ನಾನ ಮಾಡಲು ಇಳಿದು ನಿಂತ ಜನರ ಸಮೂಹದ ಮೇಲೆ ಎರಚುತ್ತಾರೆ. ಅನಂತರ ಆ ದಿವಸ ಅಲ್ಲಿ ನೆರೆದ ಯಾತ್ರಿಕರೆಲ್ಲರೂ ತೀರ್ಥ ಸ್ನಾನ ಮಾಡುತ್ತಾರೆ. ಯತ್ರಾರ್ಥಿಗಳಿಂದ ವರ್ಷವಿಡೀ ಪಡೆದುಕೊಂಡ ಪಾಪವನ್ನು ತೊಳೆದುಕೊಳ್ಳಲು ಗಂಗೆಯೂ ಕಾವೇರಿಗೆ ಬಂದು ಆ ದಿನದಂದು ಮೀಯುವಳೆಂದು ಜನರ ನಂಬಿಕೆ. ಕೊಡಗಿನಲ್ಲಿ ಕಾವೇರಿಯ ದಂಡೆಯ ಮೇಲಣ ಇತರ ಪವಿತ್ರ ಕ್ಷೇತ್ರಗಳು ಭಾಗಮಂಡಲ, ಹರಿಶ್ಚಂದ್ರ, ಬಲಮುರಿ, ಗುಹೆ ಮತ್ತು ರಾಮಸ್ವಾಮಿ ಕಣಿವೆ. ಹಾಸನ ಜಿಲ್ಲೆಯ ರಾಮನಾಥಪುರ ಒಂದು ಪ್ರಸಿದ್ಧ ಯಾತ್ರಾಸ್ಥಳ. ಚುಂಚನಕಟ್ಟೆಯಲ್ಲಿ ಕಾವೇರಿಯ ಜಲಪಾತ ಪ್ರೇಕ್ಷಣೀಯ. ದಂಡೆಯ ಮೇಲಣ ಶ್ರೀರಾಮ ದೇವಸ್ಥಾನ ಪ್ರಸಿದ್ಧವಾಗಿದೆ. ಇಲ್ಲೂ ರಾಮನಾಥಪುರದಲ್ಲೂ ವರ್ಷಕ್ಕೊಮ್ಮೆ ಜಾತ್ರೆಗಳು ಜರಗುತ್ತವೆ. ಕೃಷ್ಣರಾಜಸಾಗರದ ಬೃಂದಾವನವಂತೂ ನಯನಮನೋಹರವಾದ್ದು. ಇಲ್ಲಿ ಕಟ್ಟೆಯ ಬದಿಗೆ ಕಾವೇರಿಯ ಪ್ರತಿಮೆಯನ್ನು ಪ್ರತಿಷ್ಠಿಸಲಾಗಿದೆ. ಶ್ರೀರಂಗಪಟ್ಟಣಕ್ಕೆ ಸ್ವಲ್ಪ ಮೇಲಕ್ಕಿರುವ ಪುಟ್ಟ ನಡುಗಡ್ಡೆ ಪಕ್ಷಿಗಳಿಗೆ ಪ್ರಸಿದ್ಧವಾಗಿದೆ. ರಂಗನತಿಟ್ಟು ಎಂದು ಪ್ರಸಿದ್ಧವಾದ ಇಲ್ಲಿಯ ಪಕ್ಷಿಧಾಮಕ್ಕೆ ವಿಶ್ವದ ನಾನಾ ಕಡೆಗಳಿಂದ ಬಗೆಬಗೆಯ ಪಕ್ಷಿಗಳು ವಲಸೆ ಬರುತ್ತವೆ.

ಶ್ರೀರಂಗಪಟ್ಟಣದ ಬಳಿ ಕವಲೊಡೆಯುವ ಕಾವೇರಿಯ ಒಂದು ಶಾಖೆ ಸ್ವಲ್ಪ ದೂರ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಈ ಕಾರಣದಿಂದಾಗಿ ಆ ಭಾಗ ಹಿಂದೂಗಳಿಗೆ ಪವಿತ್ರ. ಶುಭಾಕಾರ್ಯಗಳಿಗೂ ಶ್ರಾದ್ಧಾದಿಗಳಿಗೂ ಅದು ಹೇಳಿ ಮಾಡಿಸಿದಂತಿರುವ ಸ್ಥಳ. ಕಾವೇರಿಯ ಮೂರು ದೊಡ್ಡ ದ್ವೀಪಗಳ ಪೈಕಿ ಮೊದಲನೆಯದು ಶ್ರೀರಂಗಪಟ್ಟಣ. ಇಲ್ಲೂ ಎರಡನೆಯ ದ್ವೀಪವಾದ ಶಿವಸಮುದ್ರದಲ್ಲೂ ಮೂರನೆಯದಾದ ಶ್ರೀರಂಗಂನಲ್ಲೂ ರಂಗನಾಥನ ವಿಗ್ರ್ರಹಗಳಿವೆ. ಶ್ರೀರಂಗಪಟ್ಟಣ ಇತಿಹಾಸಪ್ರಸಿದ್ಧವಾದ ಸ್ಥಳವೂ ಹೌದು. ತಲಕಾಡಿನ ಬಳಿಯಲ್ಲಿ ಮಾಧವಮಂತ್ರಿ ಅಣೆಕಟ್ಟೆ ಇದೆ. ಹೆದೆಯೇರಿಸಿದ ಬಿಲ್ಲಿನಂತೆ ಬಾಗಿ ಹರಿಯುವ ನದಿಗೆ ಇಲ್ಲೊಂದು ಮಡು ಏರ್ಪಟ್ಟಿದೆ. ಮಾಲಿಂಗಿ ಮಡುವೆಂದು ಇದು ಪ್ರಸಿದ್ಧವಾಗಿದೆ. ತಲಕಾಡು ಕೂಡ ಇತಿಹಾಸಪ್ರಸಿದ್ಧಿ ಪಡೆದ ಸ್ಥಳ. ಗಂಗರಸರು ಇಲ್ಲಿ ರಾಜ್ಯವಾಳಿದರು. ತಲಕಾಡಿನ ಪಂಚಲಿಂಗಗಳು ಹನ್ನೆರಡುವರ್ಷಗಳಿಗೊಮ್ಮೆ ಅಸಂಖ್ಯಾತ ಯಾತ್ರಿಕರನ್ನು ಆಕರ್ಷಿಸುತ್ತವೆ.

 ಶ್ರೀರಂಗಂನಿಂದಾಚೆಗೆ ಕಲ್ಲಣೈಯಲ್ಲಿ ಚೋಳರಾಜ ಕರಿಕಾಲನ ಭವ್ಯಪ್ರತಿಮೆಯಿದೆ. ಕಾವೇರಿಯನ್ನು ನೀರಾವರಿಗೆ ಉಪಯೋಗಿಸಿಕೊಂಡ ಮೊದಲ ದೊರೆ ಈತ. ತಿರುಚ್ಚಿರಪ್ಪಳ್ಳಿ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಲ್ಲಿನಿಂದ ಕಾವೇರಿನದಿಗೆ ಅಣೆಕಟ್ಟು ಕಟ್ಟಿಸಿದ್ದ. ತಿರುಚ್ಚಿರಪ್ಪಳ್ಳಿಯ ಒರೈಯೂರಿನಿಂದ ಕಾವೇರಿ ಪೂಂಪಟ್ಟಿನಂಗೆ ತನ್ನ ರಾಜಧಾನಿ ಬದಲಾಯಿಸಿದ. ಅಲ್ಲಿಂದ ಮುಂದೆ ಸಿಕ್ಕುವ ಇನ್ನೊಂದು ಮುಖ್ಯಸ್ಥಳವೆಂದರೆ ಕುಂಭಕೋಣಂ ಇಲ್ಲೂ ಹನ್ನೆರಡು ವರ್ಷಗಳಿಗೊಮ್ಮೆ ಜಾತ್ರೆ ನೆರೆಯುತ್ತದೆ.

 ತಂಜಾವೂರಿನಿಂದೀಚೆಗೆ ಸಿಗುವ ಪವಿತ್ರ ಸ್ಥಳ ತಿರುವಾರೂರು, ಮಯೂರಂ ಇನ್ನೊಂದು. ತಿರುವೈಯಾರ್ ತ್ಯಾಗರಾಜರ ತಪೋಭೂಮಿ. ಅಲ್ಲಿ ಇವರ ಸಮಾಧಿಯಿದೆ ಪ್ರತಿವರ್ಷವೂ ಇವರ ಪುಣ್ಯತಿಥಿಯಂದು ದಕ್ಷಿಣದೇಶದ ಸಂಗೀತಪ್ರೇಮಿಗಳು ಇಲ್ಲಿ ಸೇರಿ ತ್ಯಾಗರಾಜರನ್ನು ಆರಾಧಿಸುತ್ತಾರೆ. ಅನಂತರದ ಪವಿತ್ರಕ್ಷೇತ್ರ ಚಿದಂಬರಂ ಇಲ್ಲಿ ಒಂದೇ ಗುಡಿಯಲ್ಲಿ ಶಿವ, ವಿಷ್ಣು ಇಬ್ಬರಿಗೂ ಪೂಜೆ ಸಲ್ಲುತ್ತದೆ. ಕಾವೇರಿ ಕಡಲಲ್ಲಿ ಐಕ್ಯವಾಗುವ ಎಡೆಯೂ ಪವಿತ್ರವೇ. ಅದು ಸುಪ್ರಸಿದ್ಧವಾದ ಕಾವೇರಿ ಪೂಂಪಟ್ಟಿನಂ. 

 

(ಡಿ.ಎನ್.ಕೆ.; ಜಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ